ಕೋಲ್‍ಮನ್, ಜಾರ್ಜ್ (ಹಿರಿಯ)
1732-1794. ಆಂಗ್ಲ ನಾಟಕಕಾರ. ಹುಟ್ಟಿದ್ದು ಫ್ಲಾರೆನ್ಸಿನಲ್ಲಿ. ವಿದ್ಯಾಭ್ಯಾಸ ವೆಸ್ಟ್‍ಮಿನ್‍ಸ್ಟರ್ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ. ವೃತ್ತಿಯಿಂದ ಈತ ವಕೀಲ. ಗ್ಯಾರಿಕ್‍ನ ಗೆಳೆಯನಾದ ಈತ ಹಲವು ರಂಗಮಂದಿರಗಳ ಸ್ವಾಮ್ಯದಲ್ಲಿ ಪಾಲು ಪಡೆದಿದ್ದ. ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಈತ ರಚಿಸಿದ್ದಾನೆ. ಹಾಸ್ಯನಾಟಕಗಳಲ್ಲಿ ಭಾವಾವೇಶ ಮತ್ತು ಉಪದೇಶ ಮನೋವೃತ್ತಿ ಪ್ರಬಲವಾಗಿದ್ದಾಗ ನಿಜವಾದ ಹಾಸ್ಯವನ್ನು ಉಳಿಸಿಕೊಂಡವ ಕೋಲ್‍ಮನ್. ಫೀಲ್‍ಡಿಂಗ್‍ನ ಟಾಮ್ ಜೋನ್ಸ್‍ನ ಆಧಾರದ ಮೇಲೆ ದಿ ಜಲಸ್ ವೈಫ್ (1761) ಎಂಬ ಹಾಸ್ಯನಾಟಕವನ್ನು ರಚಿಸಿದ. ದಿ ಕ್ಲ್ಯಾನ್‍ಡೆಸ್ಟೈನ್ ಮ್ಯಾರೇಜ್‍ನಲ್ಲಿ (1766) ಸಹಜವಾದ ಹಾಸ್ಯ ತುಂಬಿತುಳುಕುತ್ತಿದೆ. ಜೀವಕಳೆ ಇರುವ ಪಾತ್ರಗಳನ್ನು ಅಲ್ಲಿ ಕಾಣುತ್ತೇವೆ. ರೆಸ್ಟೊರೇಷನ್ ನಾಟಕದ ಅಶ್ಲೀಲತೆಗೆ ಎಡೆಗೊಡದಂತೆ ತನ್ನ ನಾಟಕಗಳಲ್ಲಿ ಈತ ಲವಲವಿಕೆಯನ್ನು ತಂದಿದ್ದಾನೆ. ಲಿಟರರಿ ಕ್ಲಬ್ಬಿನ ಸದಸ್ಯನಾಗಿದ್ದ ಕೋಲ್‍ಮನ್ ಟೆರೆನ್ಸ್ ಮತ್ತು ಹಾರೆಸರ ಕೃತಿಗಳನ್ನು ಭಾಷಾಂತರಿಸಿದ್ದಾನೆ. ಬೊಮಾಂಟ್, ಫ್ಲೆಚರ್ ಮತ್ತು ಬೆನ್ ಜಾನ್ಸನ್ನರ ನಾಟಕಗಳನ್ನು ಸಂಪಾದಿಸಿದ್ದಾನೆ. ಅತಿಭಾವುಕತೆ ಇನ್ನೂ ಪ್ರಬಲಗೊಳ್ಳುತ್ತಿದ್ದ ಕಾಲದಲ್ಲಿ ಅದನ್ನು ಹಾಸ್ಯ ಮಾಡಿದ ಈತನ ಕೃತಿಗಳಲ್ಲಿ ಷೆರಿಡನ್ ಮತ್ತು ಗೋಲ್ಡಸ್ಮಿತ್‍ರ ಕೃತಿಗಳ ಮುನ್ಸೂಚನೆಯನ್ನು ಕಾಣಬಹುದಾಗಿದೆ.						(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ